ಬದಿಯಡ್ಕ: ಪ್ರಸ್ತುತ ದಿನಗಳಲ್ಲಿ ಎದುರಾಗುತ್ತಿರುವ ಜಲಕ್ಷಾಮ ಹಾಗೂ ನೀರಿನ ಸದ್ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬದಿಯಡ್ಕ ಗ್ರಾಮಪಂಚಾಯಿತಿಯ ಆಶ್ರಯದಲ್ಲಿ ಬೃಹತ್ ಜಲಸಂರಕ್ಷಣಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಾಳೆ (ಸೋಮವಾರ) ಅಪರಾಹ್ನ 2.30ಕ್ಕೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಈ ಮಹತ್ವದ ಕಾರ್ಯಾಗಾರ ಜರಗಲಿದೆ. ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶಂಕರ ಡಿ. ಅವರು ಅಧಿಕೃತವಾಗಿ ಉದ್ಘಾಟಿಸಲಿರುವರು.
ಜಲಜಾಗೃತಿಯೇ ಮುಖ್ಯ ಉದ್ದೇಶ:
ಸ್ಥಳೀಯವಾಗಿ ಬತ್ತಿ ಹೋಗುತ್ತಿರುವ ನೀರಿನ ಮೂಲಗಳ ಪುನಶ್ಚೇತನ, ಅಂತರ್ಜಲ ಮಟ್ಟ ವೃದ್ಧಿ, ಮಳೆನೀರು ಕೊಯ್ಲು ಪದ್ಧತಿ ಹಾಗೂ ಕೃಷಿ ರಂಗದಲ್ಲಿ ನೀರಿನ ಮಿತಬಳಕೆಯ ಬಗ್ಗೆ ಸಾರ್ವಜನಿಕರಿಗೆ ಮತ್ತು ರೈತರಿಗೆ ತರಬೇತಿ ಹಾಗೂ ಮಾಹಿತಿ ನೀಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮದಲ್ಲಿ ಬ್ಲೋಕ್, ಜಿಲ್ಲಾ, ಗ್ರಾಮಪಂಚಾಯಿತಿಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪರಿಸರ ಆಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಜಲಸಂರಕ್ಷಣೆಯ ಕುರಿತು ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವೂ ಇರಲಿದೆ. ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜಲಸಂರಕ್ಷಣಾ ಯೋಜನೆಗಳನ್ನು ಯಶಸ್ವಿಗೊಳಿಸಬೇಕಾಗಿ ಪಂಚಾಯಿತಿ ಆಡಳಿತ ಮಂಡಳಿ ವಿನಂತಿಸಿದೆ.
Tags
ಬದಿಯಡ್ಕ
