ಕಾಸರಗೋಡು: ಪಾದಾಚಾರಿ ಮಹಿಳೆಗೆ ಕತ್ತಿ ತೋರಿಸಿ ಬೆದರಿಸಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರ ಮತ್ತು ಕಿವಿಯೋಲೆಯನ್ನು ದೋಚಿದ ಘಟನೆ ಇಂದು (ಸೋಮವಾರ) ಬೆಳಿಗ್ಗೆ 10:30 ರ ಸುಮಾರಿಗೆ ಉಪ್ಪಳದ ಮಣಿಮುಂಡ ರೈಲ್ವೆ ಅಂಡರ್‌ಪಾಸ್ (ಅಡಿಪಾದೆ) ಬಳಿ ನಡೆದಿದೆ. ಉಪ್ಪಳ ಮಣಿಮುಂಡ ನಿವಾಸಿಯೂ, ಮೀನು ಮಾರಾಟ ಮಾಡುವ 65 ವರ್ಷದ ವೃದ್ಧೆ ಈ ದರೋಡೆಗೆ ಒಳಗಾದವರಾಗಿದ್ದಾರೆ.
ಮಣಿಮುಂಡ ರೈಲ್ವೆ ಅಂಡರ್‌ಪಾಸ್ ಮೂಲಕ ರೈಲ್ವೆ ಹಳಿಯ ಆಚೆಯ ದಂಡೆಗೆ ಇವರು ತಲುಪಿದ್ದರು. ಈ ವೇಳೆ ಅಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿ, ಮಹಿಳೆಯ ಎದುರಿಗೆ ಜಿಗಿದು ಬಂದು ಕತ್ತಿ ತೋರಿಸಿ ಬೆದರಿಸಿದ್ದಾನೆ. ಮಹಿಳೆ ಕಿರುಚಾಡಲು ಯತ್ನಿಸಿದಾಗ ಕತ್ತಿ ತೋರಿಸಿ ಜೀವ ಬೆದರಿಕೆ ಒಡ್ಡಿದ ಆತ, ಕೊರಳಿನಿಂದ ಸರ ಹಾಗೂ ಕಿವಿಯಿಂದ ಓಲೆಯನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ 65 ವರ್ಷದ ವೃದ್ಧೆ ಉಪ್ಪಳದ ಮೀನು ಮಾರುಕಟ್ಟೆಗೆ ತಲುಪಿ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯಿಂದ ಮಂಜೇಶ್ವರ ಪೊಲೀಸರು ವಿವರವಾದ ಹೇಳಿಕೆ ಪಡೆದುಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
