ಕಾಸರಗೋಡು: ಆಪರೇಷನ್ ತೂಫಾನ್' ಅಂಗವಾಗಿ ಪೊಲೀಸ್ ನಡೆಸಿದ ದಾಳಿಯಲ್ಲಿ ಪಟ್ಲದಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿ ಸಾಗಿಸುತ್ತಿದ್ದ 21,873 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನಗಳೊಂದಿಗೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಮಧೂರು ಪಟ್ಲ ಲಕ್ಷಂವೀಡು ಕಾಲೋನಿಯ ಕೆ. ಇಬ್ರಾಹಿಂ ಬಾತ್ಷಾ (36) ಬಂಧಿತ ಆರೋಪಿ. ನಿಷೇಧಿತ ಪಾನ್ ಮಸಾಲಾ, ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಮಾರಾಟದಿಂದ ಬಂದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಮಧ್ಯಾಹ್ನ ವಿದ್ಯಾನಗರ ಸಬ್ ಇನ್ಸ್‌ಪೆಕ್ಟರ್ ಎಸ್. ಅನೂಪ್ ಮತ್ತು ತಂಡ ನಡೆಸಿದ ತಪಾಸಣೆಯ ವೇಳೆ ಈ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. 'ಆಪರೇಷನ್ ತೂಫಾನ್' ವಿಶೇಷ ಕಾರ್ಯಾಚರಣೆಯ ಭಾಗವಾಗಿ ಸ್ಟೇಷನ್ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಪಟ್ಲ ಶಾಲೆಯ ಸಮೀಪ ರಸ್ತೆ ಬದಿಯಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಲಾಗಿದ್ದ ಕಾರು ಪೊಲೀಸರ ಗಮನಕ್ಕೆ ಬಂದಿದೆ. ಕಾರಿನ ಗ್ಲಾಸ್ ಮೂಲಕ ಇಣುಕಿ ನೋಡಿದಾಗ ಒಳಗೆ ಚೀಲಗಳು ಇರುವುದು ಕಂಡುಬಂದಿದ್ದು, ತಕ್ಷಣವೇ ಡಾಗ್ ಸ್ಕ್ವಾಡ್ ನೆರವು ಪಡೆಯಲಾಯಿತು.
ಬಳಿಕ ಸ್ಥಳೀಯರ ಸಹಾಯದಿಂದ ಕಾರಿನ ಹಿಂಬದಿಯ ಸೀಟಿನಲ್ಲಿ ಬಚ್ಚಿಟ್ಟಿದ್ದ ಮಾದಕ ವಸ್ತುಗಳನ್ನು ಪತ್ತೆಹಚ್ಚಲಾಯಿತು. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಇರಿಸಲಾಗಿದ್ದ 1,040 ರೂಪಾಯಿ ನಗದನ್ನೂ ಸಹ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜೂನಿಯರ್ ಎಸ್.ಐ ಉಮೇಶನ್, ಸಿ.ಪಿ.ಒ ಗಳಾದ ರಮೇಶ್, ನಜೇಶ್ ಮತ್ತು ಬಿನು ಪಾಲ್ಗೊಂಡಿದ್ದರು.
Tags
ಕಾಸರಗೋಡು
