ಪೈಕ ಶಾಲೆಯಲ್ಲಿ ಹಲಸಿನ ಸಂಭ್ರಮ; ನಾಲಿಗೆ ತಣಿಸಿದ ಹಲಸಿನ ವೈವಿಧ್ಯಮಯ ಖಾದ್ಯಗಳು



ಬದಿಯಡ್ಕ: ಪೈಕ ಎಕೆಎಂಎಂಎಯುಪಿ ಶಾಲೆಯಲ್ಲಿ ಅದ್ಧೂರಿ ಹಲಸು ಮೇಳ ಕಾರ್ಯಕ್ರಮ ಸೋಮವಾರ ಬೆಳಗ್ಗೆ ಜರಗಿತು. ಇಂದಿನ ಜಂಕ್ ಫುಡ್ ಸಂಸ್ಕೃತಿಯ ನಡುವೆ ಗ್ರಾಮೀಣ ಭಾಗದ ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಲಸಿನ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿ ಗಮನಸೆಳೆದರು. ಚೆಂಗಳ ಗ್ರಾಮಪಂಚಾಯಿತಿ ವಾರ್ಡು ಸದಸ್ಯ ಇಬ್ರಾಹಿಂ ಕೊಯರ್‌ಕೊಚ್ಚಿ ಉದ್ಘಾಟಿಸಿ ಮಾತನಾಡುತ್ತಾ ಹಲಸು ನಮ್ಮ ಮಣ್ಣಿನ ಅಮೂಲ್ಯ ಸಂಪತ್ತು. ಇಂದಿನ ಪೀಳಿಗೆಯ ಮಕ್ಕಳಿಗೆ ಪ್ರಕೃತಿಯ ಕೊಡುಗೆಗಳ ಬಗ್ಗೆ ಹಾಗೂ ನಮ್ಮ ಹಿರಿಯರು ಬೆಳೆಸಿಕೊಂಡು ಬಂದ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಅಧ್ಯಕ್ಷತೆ ವಹಿಸಿದ್ದರು. ನೆಕ್ರಾಜೆ ಸೇವಾ ಸಹಕಾರಿ ಬೇಂಕ್ ಅಧ್ಯಕ್ಷ ಇಬ್ರಾಹಿಂ ನೆಲ್ಲಿಕಟ್ಟೆ, ಗ್ರಾಮಪಂಚಾಯಿತಿ ಸದಸ್ಯೆ ಶೈಲಜಾ ಪಿ., ಬೇಂಕ್ ಕಾರ್ಯದರ್ಶಿ ನಾರಾಯಣ ನಾಯರ್, ಉಪಾಧ್ಯಕ್ಷ ರಾಧಾಕೃಷ್ಣ ನಾಯ್ಕ್, ಶಾಲಾ ಆಡಳಿತ ಮಂಡಳಿಯ ಅಡ್ವಕೇಟ್ ಅಶೋಕ್ ಕುಮಾರ್, ಕೃಷ್ಣನ್, ನಿತ್ಯಾನಂದ ನೆಲ್ಲಿತ್ತಲ, ಶಾಲಾ ಮುಖ್ಯೋಪಾಧ್ಯಾಯ ಶಶಿಧರ್, ರಕ್ಷಕರಾದ ಶಿವರಾಮ, ತಸ್ಲೀಮ್, ಅಧ್ಯಾಪಿಕೆ ಪುಷ್ಪ ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅರುಣ ಕುಮಾರಿ ಸ್ವಾಗತಿಸಿ, ಶ್ರೀಕೃಷ್ಣ ವಂದಿಸಿದರು. ಅಧ್ಯಾಪಕ ಉಮೇಶ್ ನಿರೂಪಿಸಿದರು.

ನಾಲಿಗೆ ತಣಿಸಿದ ಹಲಸಿನ ವೈವಿಧ್ಯಮಯ ಖಾದ್ಯಗಳು : 

ಸಂಭ್ರಮದ ಪ್ರಮುಖ ಆಕರ್ಷಣೆಯಾಗಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಜಂಟಿಯಾಗಿ ಸಿದ್ಧಪಡಿಸಿದ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಪ್ರದರ್ಶನ ನಡೆಯಿತು. 

ಪ್ರದರ್ಶನದ ಪ್ರಮುಖ ಖಾದ್ಯಗಳು : 

ಹಲಸಿನ ಹಣ್ಣಿನ ಪಾಯಸ, ಕಡುಬು, ಕಾಯಿ ದೋಸೆ, ಪತ್ರೊಡೆ, ಗಟ್ಟಿ, ಹಲಸಿನ ಹಪ್ಪಳ, ಚಿಪ್ಸ್, ಹಲಸಿನ ಬೀಜದಿಂದ ತಯಾರಿಸಿದ ವೈವಿಧ್ಯಮಯ ಸಾಂಬಾರುಗಳು, ಉಣ್ಣಿ ಅಪ್ಪ, ಹೋಳಿಗೆ ಮೊದಲಾದ ಅನೇಕ ಖಾದ್ಯಗಳು ಪ್ರದರ್ಶನಕ್ಕಿಡಲಾಯಿತು. ಖಾದ್ಯಗಳನ್ನು ಮಕ್ಕಳು ಹಾಗೂ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಸವಿದು ಆನಂದಿಸಿದರು. ಗ್ರಾಮೀಣ ಕೃಷಿ ಸಂಸ್ಕೃತಿಯನ್ನು ಬಿಂಬಿಸುವ ಈ ಮೇಳವು ನೆರೆದಿದ್ದವರ ಗಮನ ಸೆಳೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು