ಕಾಸರಗೋಡು: ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ಲಸ್ ಟು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಮುಳ್ಳೇರಿಯ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷಾ (17) ಇಂದು (ಮಂಗಳವಾರ) ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ನಿಧನರಾಗಿದ್ದಾರೆ. ಚೆಂಗಳ, ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಮುಳ್ಳೇರಿಯಾ ವಿವೇಕಾನಂದ ನಗರದ ನಿವಾಸಿಯಾಗಿದ್ದು, ಮಗಳು ಕಲಿಯುತ್ತಿರುವ ಶಾಲೆಯಲ್ಲೇ ಅಡುಗೆ ಕೆಲಸಗಾರರಾಗಿರುವ ಬಿ. ಕೃಷ್ಣ ಇವರ ತಂದೆ. ತಾಯಿ: ರಾಧಾಮಣಿ. ಮುಳ್ಳೇರಿಯ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ದೀಪಕ್ ಏಕೈಕ ಸಹೋದರ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ನಾಳೆ (ಬುಧವಾರ) ಬೆಳಿಗ್ಗೆ 9 ಗಂಟೆಗೆ ಮುಳ್ಳೇರಿಯ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿದ ಬಳಿಕ ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಲಾಗುವುದು.
ಜೂನ್ 23 ರಂದು ಸಂಜೆ ನಾಲ್ಕು ಗಂಟೆಯ ವೇಳೆ ಈ ಅಪಘಾತ ಸಂಭವಿಸಿತ್ತು. ನೆರೆಮನೆಯ ಮಗುವಾದ ಶ್ರೇಯಾನ್ (4) ಎಂಬ ಬಾಲಕನನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮುಳ್ಳೇರಿಯ - ಬದಿಯಡ್ಕ ರಸ್ತೆಯ ಗಜಾನನ ಶಾಲೆಯ ಸಮೀಪ ಅತಿ ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿತ್ತು. ಶ್ರೇಯಾನ್ ಇಂದಿರಾ ನಗರದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Tags
ಮುಳ್ಳೇರಿಯ
