ನಾಗರಹಾವು ಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕುವರೆ ವರ್ಷದ ಬಾಲಕಿ ಸಾವು

ಕಾಸರಗೋಡು: ನಾಗರಹಾವು ಕಚ್ಚಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕುವರೆ ವರ್ಷದ ಬಾಲಕಿ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾಳೆ.

ವೆಳ್ಳರಿಕುಂಡು ತಾಲೂಕಿನ ನರ್ಕಿಲಕ್ಕಾಡ್, ಎಳೇರಿತ್ತಟ್ಟು ನಿವಾಸಿಗಳಾದ ಶರತ್ ಚಂದ್ರನ್ ಮತ್ತು ಅಜಿತ ದಂಪತಿಯ ಪುತ್ರಿ  ಋತು ಚಂದ್ರ (4.5 ವರ್ಷ) ಮೃತ ದುರ್ದೈವಿ.

ಕಳೆದ ಸೋಮವಾರ ಮಗು ಮನೆಯ ಬಳಿ ಆಟವಾಡುತ್ತಿದ್ದಾಗ, ದೂರ ಬಿದ್ದ ಚೆಂಡನ್ನು ತರಲು ಹೋದಾಗ ನಾಗರಹಾವು ಕಚ್ಚಿದೆ.

 ಕೂಡಲೇ ಮಗುವನ್ನು ನರ್ಕಿಲಕ್ಕಾಡ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಪಯ್ಯನ್ನೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

 ಮಗುವಿನ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಕಾರಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮಧ್ಯಾಹ್ನ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ಬೇಸಿಗೆ ಆರಂಭವಾದ ನಂತರ ಕಾಸರಗೋಡು ಜಿಲ್ಲೆಯಲ್ಲಿ ವರದಿಯಾದ ಮೊದಲ ಹಾವಿನ ಕಡಿತದ ಸಾವು ಇದಾಗಿದೆ. ಈ ಘಟನೆಯು ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು