ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಜನಪ್ರತಿನಿಧಿಗಳನ್ನು ಪಡೆಯುವ ಅವಕಾಶವನ್ನು ತಪ್ಪಿಸಿ ದ್ರೋಹ ಬಗೆಯಲಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಈ ಮಸೂದೆಯನ್ನು ಎಂದಿಗೂ ತಡೆಹಿಡಿಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಲು ಮುಂದಾದ ವಿರೋಧ ಪಕ್ಷಗಳ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿಯು ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಮಸೂದೆಯು ಅಂಗೀಕಾರವಾಗಿದ್ದರೆ ಕೇರಳಕ್ಕೆ 30 ಲೋಕಸಭಾ ಸಂಸದರನ್ನು ಪಡೆಯುವ ಅವಕಾಶವಿತ್ತು. ಆದರೆ ಮಸೂದೆಯ ವಿಫಲತೆಯಿಂದಾಗಿ ಪ್ರಸ್ತುತ ಇರುವ 20 ಸೀಟುಗಳಿಂದ 4 ಅಥವಾ 5 ಸೀಟುಗಳು ಕಡಿಮೆಯಾಗುವ ಸಾಧ್ಯತೆಯಿದೆ.
ಈ ಮಸೂದೆಯನ್ನು ಮಂಡಿಸುವಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಯಿಲ್ಲ. 2026ರ ಜನಗಣತಿ ಪೂರ್ಣಗೊಂಡ ತಕ್ಷಣ ಕ್ಷೇತ್ರ ಮರುವಿಂಗಡಣೆ ನಡೆಯಲಿದೆ. ಆ ನಂತರ ಮೀಸಲಾತಿ ಪ್ರಕ್ರಿಯೆ ಆರಂಭವಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ 33% ಮೀಸಲಾತಿ ಜಾರಿಗೊಳಿಸಲು ಸಾಧ್ಯವಾಗುತ್ತಿತ್ತು. ಅದಕ್ಕಾಗಿಯೇ ವಿಳಂಬ ಮಾಡದೆ ಮಸೂದೆಯನ್ನು ಮಂಡಿಸಲಾಯಿತು.
ಶಾ ಬಾನು ಪ್ರಕರಣ ಮತ್ತು ಮುತಲಾಕ್ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನಿಲುವು ಈ ಹಿಂದೆಯೇ ಪ್ರಕಟವಾಗಿತ್ತು ಎಂದು ಅವರು ನೆನಪಿಸಿದರು. ಆರ್ಟಿಕಲ್ 370 ರದ್ದತಿ ಮತ್ತು ತೆರಿಗೆ ಸುಧಾರಣೆಗಳಂತೆ ಇದೂ ಒಂದು ಐತಿಹಾಸಿಕ ನಿರ್ಧಾರವಾಗಬೇಕಿತ್ತು. ಇದನ್ನು ವಿರೋಧಿಸಿದವರು ಮುಂದಿನ ದಿನಗಳಲ್ಲಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕೌನ್ಸಿಲ್ ಸದಸ್ಯೆ ಪ್ರಮೀಳಾ ಸಿ. ನಾಯ್ಕ್, ರಾಜ್ಯ ಸಮಿತಿ ಸದಸ್ಯರಾದ ಸವಿತಾ ಟೀಚರ್, ಸತೀಶ್ ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷೆ ಎಚ್. ಆರ್. ಸುಕನ್ಯಾ, ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಅಶ್ವಿನಿ ಕೆ.ಎಂ., ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನಭಾಗ್, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್. ರಮಣಿ ಮತ್ತಿತರರು ಉಪಸ್ಥಿತರಿದ್ದರು.
ಕಾಸರಗೋಡಿನ ತಾಳಿಪಡ್ಪು ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.



