ಬದಿಯಡ್ಕ: ಕುಂಬಳೆ ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯ ಬದಿಯಡ್ಕ-ನೀರ್ಚಾಲು ಸಮೀಪದ ಪಡಿಪ್ಪರೆ ಎಂಬಲ್ಲಿ ರಸ್ತೆಗೆ ವಾಲಿಕೊಂಡಿರುವ ತೆಂಗಿನಮರವೊಂದು ಅಪಾಯಕಾರಿಯಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಕಡಿದು ತೆಗೆಯಲು ತೀರ್ಮಾನಿಸಲಾಗಿದೆ. ಪಡಿಪ್ಪರೆ ಕನ್ನೆಪ್ಪಾಡಿ ಗಣಪತಿ ಭಟ್ ಅವರು ತನ್ನ ಸ್ವಂತ ಸ್ಥಳದಲ್ಲಿರುವ ಮರವನ್ನು ಕಾರ್ಮಿಕರ ಮೂಲಕ ತೆರವುಗೊಳಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ಯುತ್ ಇಲಾಖೆಯೂ ಅವರಿಗೆ ಬೇಕಾದ ವ್ಯವಸ್ಥೆಯನ್ನು ನೀಡುವುದಾಗಿ ತಿಳಿಸಿದ್ದಾರೆ. ಬದಿಯಡ್ಕ ಗ್ರಾಮಪಂಚಾಯಿತು ನೀರ್ಚಾಲು 3ನೇ ವಾರ್ಡು ವ್ಯಾಪ್ತಿಯಲ್ಲಿರುವ ಮನೆಯವರಾದ ಗಣಪತಿ ಭಟ್ಟರೊಂದಿಗೆ ಗ್ರಾಮಪಂಚಾಯತು ಅಧ್ಯಕ್ಷ ಶಂಕರ ಡಿ, ಗ್ರಾಮಪಂಚಾಯತು ಸದಸ್ಯ ಶ್ಯಾಮಪ್ರಸಾದ ಸರಳಿ ಮೊದಲಾದವರು ಮಾತುಕತೆ ನಡೆಸಿದ್ದರು. ರಸ್ತೆ ಬದಿಯಲ್ಲಿರುವ ಮರವು ಇತ್ತೀಚೆಗೆ ಕೆಲವು ಸಮಯಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಅವರು ಈ ನಿರ್ಧಾರವನ್ನು ಕೈಗೊಂಡಿದ್ದರು. ಈ ತೆಂಗಿನ ಮರದ ಕೆಳಗೆ ವಿದ್ಯುತ್ ತಂತಿ ಹಾದುಹೋಗುವ ಹಿನ್ನೆಲೆಯಲ್ಲಿ ವಿದ್ಯುತ್ ಇಲಾಖೆಯ ಸಹಕಾರವೂ ಲಭಿಸಿದೆ.
Tags
ಬದಿಯಡ್ಕ
