ವಿವಿಧ ಕೇಂದ್ರಗಳಲ್ಲಿ ನಾಳೆ ಮಕ್ಕಳಿಗೆ ಪೊಲೀಯೋ ಲಸಿಕೆ; ಸಿದ್ದತಾ ಸಭೆ ಉದ್ಘಾಟಿಸಿದ ಬದಿಯಡ್ಕ ಗ್ರಾಮ‌ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ


 ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಆರೋಗ್ಯ ಕೇಂದ್ರದ ವತಿಯಿಂದ ಪಲ್ಸ್ ಪೊಲೀಯೋ ಲಸಿಕೆ ನಾಳೆ (ಜೂ.28) ವಿವಿಧ ಕೇಂದ್ರಗಳಲ್ಲಿ ನೀಡಲಾಗುವುದು. ಪೂರ್ವಭಾವಿ ಸಿದ್ಧತಾ ಸಭೆ ಇಂದು (ಶನಿವಾರ) ಬದಿಯಡ್ಕ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಜರಗಿತು. ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಉದ್ಘಾಟಿಸಿ ಮಾತನಾಡುತ್ತಾ ಆರೋಗ್ಯವೇ ಭಾಗ್ಯ ಎಂಬುದು ಕೇವಲ ಗಾದೆಯಲ್ಲ, ಅದು ನಮ್ಮ ಜೀವನದ ಸತ್ಯ. ಒಂದು ದೇಶ ಸದೃಢವಾಗಬೇಕಾದರೆ, ಆ ದೇಶದ ಭವಿಷ್ಯವಾಗಿರುವ ಮಕ್ಕಳು ಆರೋಗ್ಯವಾಗಿರಬೇಕು. ಪೋಲಿಯೋ ಎಂಬ ರೋಗವು ಒಂದು ಕಾಲದಲ್ಲಿ ನಮ್ಮ ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದ ಮಹಾಮಾರಿಯಾಗಿತ್ತು. ಆದರೆ, ನಮ್ಮ ಸರ್ಕಾರದ ದೃಢ ಸಂಕಲ್ಪ, ಆರೋಗ್ಯ ಕಾರ್ಯಕರ್ತರ ಅಪ್ರತಿಮ ಶ್ರಮ ಮತ್ತು ಸಾರ್ವಜನಿಕರ ಜಾಗೃತಿಯಿಂದಾಗಿ ಇಂದು ಭಾರತವು ಪೋಲಿಯೋ ಮುಕ್ತ ದೇಶವಾಗಿ ಹೊರಹೊಮ್ಮಿದೆ. ನಾವು ಸದಾ ಜಾಗೃತರಾಗಿರಬೇಕು. `ಅಲಕ್ಷ್ಯ ಬೇಡ, ಸುರಕ್ಷತೆ ಮುಖ್ಯ' ಎಂಬುದನ್ನು ನಾವು ಮರೆಯಬಾರದು. ಯಾವುದೇ ಒಂದು ಮಗುವೂ ಸಹ ಪೋಲಿಯೋ ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು. ನಮ್ಮ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳು ಈ ಕಾರ್ಯಕ್ರಮದ ನಿಜವಾದ ಬೆನ್ನೆಲುಬು. ಮಳೆ, ಬಿಸಿಲನ್ನದೆ ಪ್ರತಿಯೊಂದು ಮಗುವಿಗೂ ಎರಡು ಹನಿ ಲಸಿಕೆ ತಲುಪಿಸುವ ನಿಮ್ಮ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು. ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಪೋಲಿಯೋ ನಿರ್ಮೂಲನೆ ಕೇವಲ ಆರೋಗ್ಯ ಇಲಾಖೆಯ ಕೆಲಸವಲ್ಲ, ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಎರಡು ಹನಿ ಜೀವ ರಕ್ಷಕ ಲಸಿಕೆ ಪ್ರತಿಯೊಂದು ಮಗುವಿಗೂ ಸಿಗುವಂತೆ ಮಾಡೋಣ ಎಂದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ವಿವಿಧ ವಾರ್ಡುಗಳ ಸದಸ್ಯರು ಪಾಲ್ಗೊಂಡಿದ್ದರು. ಅರೋಗ್ಯ ಇಲಾಖೆಯ ರಾಜೇಶ್ ಸ್ವಾಗತಿಸಿ, ಅಂಬಿಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು