ಮೀನಿಗೆ ಆಹಾರ ನೀಡುತ್ತಿದ್ದ ವೇಳೆ ಕಾಲು ಜಾರಿ ಕ್ವಾರಿ ಗುಂಡಿಗೆ ಬಿದ್ದು ಗೃಹಸ್ಥ ಸಾವು


ಕಾಸರಗೋಡು:  ಮೀನುಗಳಿಗೆ ಆಹಾರ ನೀಡಲು ಹೋದಾಗ ಆಕಸ್ಮಿಕವಾಗಿ ಕ್ವಾರಿ ಗುಂಡಿಯ ನೀರಿಗೆ ಬಿದ್ದು ಗೃಹಸ್ಥರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಚೆರುವತ್ತೂರು ಕೊಡಕ್ಕಾಡ್, ವಲಿಯಪೊಯಿಲ್ ನಿವಾಸಿ **ಪಿ.ಪಿ. ಬಾಲನ್ (76) ಮೃತಪಟ್ಟ ದುರ್ದೈವಿ. ನಿನ್ನೆ  (ಸೋಮವಾರ) ಸಂಜೆ ಈ ಘಟನೆ ನಡೆದಿದೆ. ಬಾಲನ್ ಅವರು ತಮ್ಮ ಮನೆಯ ಸಮೀಪವಿರುವ ಕ್ವಾರಿಯ ನೀರಿನಲ್ಲಿ ಸಾಕಿರುವ ಮೀನುಗಳಿಗೆ ಆಹಾರ ನೀಡಲು ತೆರಳಿದ್ದರು. ಸಂಜೆಯಾದರೂ ಅವರು ಮನೆಗೆ ಮರಳದಿದ್ದಾಗ ಆತಂಕಗೊಂಡ ಮನೆಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದಾರೆ. ಅವರು ನೀರಿಗೆ ಬಿದ್ದಿರಬಹುದು ಎಂಬ ಸಂಶಯದ ಮೇಲೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.

ಚೀಮೇನಿಯಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ರಾತ್ರಿ 10:40ರ ಸುಮಾರಿಗೆ ಅವರ ದೇಹವನ್ನು ನೀರಿನಿಂದ ಹೊರತೆಗೆದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಮೃತರು ಪತ್ನಿ ರುಕ್ಮಿಣಿ, ಮಕ್ಕಳಾದ ದಿಲೀಪ್, ದಿಜೇಶ್, ದೀಪಾ ಮತ್ತು ಅಳಿಯ-ಸೊಸೆಯಂದಿರನ್ನು ಅಗಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು