ತಿರುವನಂತಪುರಂ: ರಾಜ್ಯದ ಕಣ್ಣೂರು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ತಾಳಲಾರದೆ ಇಬ್ಬರು ಸೂರ್ಯಾಘಾತಕ್ಕೆ (Sunburn) ಒಳಗಾಗಿದ್ದಾರೆ.ಕಣ್ಣೂರು ಕಾಂಜಿರಕೊಲ್ಲಿಯ ನಿವಾಸಿ ಅಬಿನ್ ಜೋಸ್ ಎಂಬುವವರು ಕುಡಿಯುವ ನೀರಿನ ಪೈಪ್‌ಲೈನ್ ದುರಸ್ತಿ ಮಾಡುತ್ತಿದ್ದಾಗ ಸೂರ್ಯಾಘಾತದಿಂದ ಸುಟ್ಟ ಗಾಯಗಳಾಗಿವೆ. ಇವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಪಾಲಕ್ಕಾಡ್ ಪೆರುವಂಬದ ದೀಕ್ಷಿತ್ (12) ಎಂಬ ಬಾಲಕನಿಗೆ ಸೂರ್ಯಾಘಾತವಾಗಿದೆ. ಕಳೆದ ವಾರ ಹೊರಗಡೆ ಆಟವಾಡಲು ಹೋದಾಗ ತೊಂದರೆ ಶುರುವಾಗಿತ್ತು, ಆಸ್ಪತ್ರೆಗೆ ದಾಖಲಿಸಿದಾಗ ಸೂರ್ಯಾಘಾತದಿಂದ ಕುತ್ತಿಗೆಯ ಸುತ್ತ ಸುಟ್ಟ ಗಾಯಗಳಾಗಿರುವುದು ದೃಢಪಟ್ಟಿದೆ. ಇದೇ ವೇಳೆ ಪಾಲಕ್ಕಾಡ್ ನಗರದಲ್ಲಿ ಚಲಿಸುತ್ತಿದ್ದ ಕಾರೊಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿದ್ದಾರೆ. ಕಾರಿನಿಂದ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಎಚ್ಚರಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.
ಬಿಸಿಲು ಹೆಚ್ಚಾಗಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿರಲು ಮತ್ತು ಮಧ್ಯಾಹ್ನದ ಸಮಯದಲ್ಲಿ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಂತೆ ಆರೋಗ್ಯ ಇಲಾಖೆ ಸೂಚಿಸಿದೆ.
