ಬದಿಯಡ್ಕ: ಹಿಂದುಗಳೆಲ್ಲಾ ಒಗ್ಗಟ್ಟಾಗಿ ಸಮಾಜ ಸಂಘಟನಾ ಕಾರ್ಯವನ್ನು ಮಾಡುತ್ತಾ ಎದುರಿಸುವ ಸವಾಲುಗಳನ್ನು ನಿಭಾಯಿಸಿಕೊಂಡು ಮುಂದುವರಿಯಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ದಿ ಆಚರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಹಿಂದೂಸಮಾಜೋತ್ಸವವನ್ನು ಯಶಸ್ವಿಗೊಳಿಸಬೇಕು. ಮುಂದೆಯೂ ಸಮಾಜದ ತೊಂದರೆಗಳನ್ನು ನಿವಾರಿಸುತ್ತಾ ಆರ್ಥಿಕವಾಗಿ ಬಲಿಷ್ಠರಾಗಬೇಕು. ಸಂಘಟಿತ ಶಕ್ತಿಯ ಮೂಲಕ ಸಮಾಜವನ್ನು ಒಂದುಗೂಡಿಸುವ ಕಾರ್ಯ ನಡೆಯಲಿ. ಭಜನೆ, ಧ್ಯಾನ, ನಾಮಜಪದ ಮೂಲಕ ನಮ್ಮೊಳಗಿನ ಶಕ್ತಿ ಗಟ್ಟಿಯಾಗಬೇಕು ಎಂದು ಕಂಬಾರು ಮುಖ್ಯಪ್ರಾಣ ಮಠದ ಶ್ರೀ ಅಂಜನೇಶ್ವರ ಸ್ವಾಮೀಜಿ ತಿಳಿಸಿದರು.
ಮಾರ್ಚ್ ೧ರಂದು ಬದಿಯಡ್ಕದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಆಶೀರ್ವಚನವನ್ನು ನೀಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸೇವಾಪ್ರಮುಖ್ ಮಂಜುನಾಥ ಕಾರ್ಲೆ ಮಾತನಾಡುತ್ತಾ ಬಲವಾದ ಉದ್ದೇಶವನ್ನಿಟ್ಟುಕೊಂಡು ಸಮಾಜವು ಸಂಘಟಿತರಾಗಬೇಕು. ಹಿಂದೂ ಸಮಾಜಕ್ಕೆ ವಿಶ್ವಾಸವನ್ನು ನೀಡುವ ಕಾರ್ಯಕ್ರಮವಾಗಬೇಕು. ಮುಂದೆ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ನಾಡಿನ ಪ್ರತಿಯೊಂದು ಮನೆಯಿಂದ ಹಿಂದುಗಳು ಪಾಲ್ಗೊಳ್ಳುವಂತೆ ಕಾರ್ಯಕರ್ತರು ಆಮಂತ್ರಣ ಪತ್ರಿಕೆಯ ವಿತರಣೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಮಾನ್ಯ ಬದಿಯಡ್ಕ ಖಂಡ್ ಸಂಘಚಾಲಕ್ ರಮೇಶ್ ಕಳೇರಿ, ಕಾರ್ಯಕ್ರಮ ವ್ಯವಸ್ಥಾಪಕ ಜಯರಾಮ ಚೆಟ್ಟಿಯಾರ್ ಬದಿಯಡ್ಕ, ಮಾತೃಸಮಿತಿಯ ಜಯಂತಿ ಕುಂಟಿಕಾನ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಬಿ.ಎನ್. ಸ್ವಾಗತಿಸಿ, ಶ್ಯಾಮಪ್ರಸಾದ ಸರಳಿ ವಂದಿಸಿದರು. ಗುರುಪ್ರಸಾದ ರೈ ಕಾರ್ಯಕ್ರಮ ನಿರೂಪಿಸಿದರು.
